ಕಿಪ್ಚಾಕ್

 ಕ್ರಿ. ಶ 11 ನೆಯ ಶತಮಾನದ ಹೊತ್ತಿಗೆ ಕಪ್ಪುಸಮುದ್ರದ ಉತ್ತರಭಾಗವನ್ನು ಆಕ್ರಮಿಸಿ, ಅಲ್ಲಿ ಪ್ರಬಲವಾಗಿದ್ದ ಒಂದು ಜನಾಂಗ. ರಷ್ಯನರ ಇತಿವೃತ್ತಿಗಳಲ್ಲಿ ಇವರ ಹೆಸರು ಮೊಟ್ಟಮೊದಲಿಗೆ ಬರುವುದು 1054ರಲ್ಲಿ. ಕಿಪ್ಚಾಕ್ ಎಂಬುದು ತುರ್ಕಿ ಭಾಷೆಯ ಪದ. ರಷ್ಯನ್ ಭಾಷೆಯಲ್ಲಿ ಈ ಜನಾಂಗವನ್ನು ಪಾಲೋವ್‍ತ್ಸಿ ಎಂದು ಕರೆಯುತ್ತಾರೆ. ಬಿeóÁಂಟಿನ್ ಮತ್ತು ಲ್ಯಾಟಿನ್ ಮೂಲಗಳಲ್ಲಿ ಕೊಮಾನೊಯ್ ಅಥವಾ ಕೊಮಾನಿ ಎಂಬ ಪರ್ಯಾಯವಾದ ಅಂಕಿತಗಳು ಕಂಡುಬರುತ್ತವೆ. ವಾಲನಿ, ಪಲ್ಲಡಿ, ಫಾಲೋನ್ಸ್ ಮುಂತಾದವು ಕಿಪ್ಚಾಕ್ ಜನಾಂಗಕ್ಕೆ ಇತರ ಐರೋಪ್ಯ ಮೂಲಗಳಲ್ಲಿ ಕಂಡುಬರುವ ಹೆಸರುಗಳು. ಕಿಪ್ಚಾಕ್ ಜನರನ್ನೇ ಕುಮಾನೊಯರೆಂದೂ ಹೇಳುತ್ತಾರೆ. 11ನೆಯ ಶತಮಾನದಿಂದ 13ನೆಯ ಶತಮಾನದವರೆಗೂ ಪ್ರಬಲವಾಗಿದ್ದ ಈ ಜನಾಂಗ ಮಂಗೋಲಿಯನರ ಆಕ್ರಮಣದೊಂದಿಗೆ ಅವನತಿಯಾಯಿತು.

 ಕಿಪ್ಚಾಕ್ ಜನಾಂಗದ ಮೂಲ ಯಾವುದೆಂಬುದನ್ನು ನಿರ್ಣಯಿಸುವುದು ಕಷ್ಟ. ಈ ಜನಾಂಗದಿಂದ ಒಂದು ಭಾಗ ಮಾತ್ರವಾದರೂ ಸಾರಿ ಉಯ್‍ಗರ್ಸ್‍ಗೆ ಸಂಬಂಧಿಸಿದ ಸಾರಿ ಜನಾಂಗದಿಂದ ಹೊರಹೊಮ್ಮಿದೆಯೆಂದು ಹೇಳಬಹುದು. ಈಗಲೂ ಚೀನೀ ತುರ್ಕಿಸ್ಥಾನದಲ್ಲಿ ಈ ಪಂಗಡದ ಜನ ಕಂಡುಬರುತ್ತಾರೆ. ಈ ಜನಾಂಗದ ಕೆಲವು ಬಣಗಳು ಮೂಲದಲ್ಲಿ ಚೀನದ ಗಡಿಪ್ರದೇಶಗಳಲ್ಲಿದ್ದುವೆಂದೂ ಹೇಳಬಹುದು. ಮಂಗೋಲ್ ಭಾಷೆಯಾಡುವ ಕಿಟಾಯರು ಪಶ್ಚಿಮ ಸೈಬೀರಿಯದಲ್ಲಿ ಕಿಪ್ಚಾಕರ ನ್ನೊಡಗೂಡಿದರೆಂದು ಸ್ಥೂಲವಾಗಿ ಹೇಳಬಹುದು. ಪಶ್ಚಿಮ ಸೈಬೀರಿಯದಲ್ಲಿ 9ನೆಯ ಶತಮಾನದಿಂದಲೂ ಕಿಟಾಯರು ಇದ್ದರೆಂದೂ ಅಲ್ಲಿಂದ ಅವರು ದಕ್ಷಿಣ ರಷ್ಯಕ್ಕೆ ವಲಸೆ ಬಂದರೆಂದೂ ಐತಿಹ್ಯವಿದೆ.

 ಪೆಶೆನೆಗ್ಸ್ ಎಂಬ ತುರ್ಕಿ ಜನತೆಯ ಮಿತ್ರರಾಗಿ ಕಿಪ್ಚಾಕರು 1078ರಲ್ಲಿ ಬಿeóÁಂಟಿನರೊಂದಿಗೆ ಹೋರಾಟವಾರಂಭಿಸಿ ಏಡ್ರಿಯಾನೊಪಲನ್ನು ಆಕ್ರಮಿಸಿದರು. ಆದರೆ 1091ರಲ್ಲಿ ಶತ್ರುಪಕ್ಷವನ್ನು ವಹಿಸಿ ಪೆಶೆನೆಗ್ ಆಧಿಪತ್ಯದ ವಿರುದ್ಧವಾಗಿ ಹೋರಾಡಿ ಅದನ್ನು ನೆಲಸಮ ಮಾಡಿದರು. 1094 ಮತ್ತು 1114 ಕಿಪ್ಚಾಕರ ವಿರುದ್ಧವಾಗಿ ಬಿಂeóÁಂಟಿನ್ ಚಕ್ರವರ್ತಿ ಅಲೆಕ್ಸಿಯನ್ ಹೋರಾಟ ನಡೆಸಿದ. ಕಿಪ್ಚಾಕ್ ಬಣಗಳು ಕಾರ್ಪೇಥಿಯನ್ ಪರ್ವತದ ಪೂರ್ವಭಾಗದ ಉದ್ದಕ್ಕೂ ಸೆಣಸಾಡಿದವು. ದಣಿದಿದ್ದ ತಮ್ಮ ಬಲಗಳನ್ನು ಯಾರು ಹೆಚ್ಚು ಹಣ ನೀಡುತ್ತಾರೋ ಅವರ ನೆರವಿಗೆ ನೀಡಲು ಬಯಸಿದರು. ಕಾನ್ಸ್ಟಾಂಟಿನೋಪಲಿನ ಲ್ಯಾಟಿನ್ ಅಥವಾ ಫ್ರಾಂಕಿಸ್ ಚಕ್ರವರ್ತಿಯಾಗಿದ್ದ ಒಂದನೆಯ ಬಾಡ್ವಿನನ ವಿರುದ್ಧ 1205ರಲ್ಲಿ ನಡೆದ ಯುದ್ಧದಲ್ಲಿ ಕಿಪ್ಚಾಕರು ಕಲೋಯಾನ್ ಅಸೆನ್ನರ ಪರ ವಹಿಸಿದರು. 1221-23ರಲ್ಲಿ ಮಂಗೋಲರು ರಷ್ಯದ ಮೇಲೆ ದಂಡೆತ್ತಿ ಬಂದಾಗ ಕಿಪ್ಚಾಕರು ಒಂದು ಬಾರಿ ಮಂಗೋಲರ ಪರವಾಗಿಯೂ ಮತ್ತೊಂದು ಬಾರಿ ರಷ್ಯನರ ಪರವಾಗಿಯೂ ಯುದ್ಧ ಮಾಡಿದರು. ಒಟ್ಟಿನಲ್ಲಿ ಅವರು ಯಾವೊಂದು ಪಕ್ಷಕ್ಕೂ ನಿಷ್ಠೆ ತೋರಿಸಲಿಲ್ಲ. 1237ರಲ್ಲಿ ಪುನಃ ಮಂಗೋಲರು ಕಿಪ್ಚಾಕ್ ಪ್ರಾಂತ್ಯಗಳ ಮೇಲೆ ದಾಳಿ ಮಾಡಿ ಪೂರ್ವಬಣಗಳ ನಾಯಕನಾಗಿದ್ದ ಬಾಚ್‍ಮನನನ್ನು ಕೊಂದರು ಹೀಗಾಗಿ ಪಶ್ಚಿಮ ಕಿಪ್ಚಾಕರ (ಕುಮಾನರ) ನಾಯಕ ಕುಥೆನನಿಗೆ ರಷ್ಯನರ ಆಕ್ರಮಣವನ್ನೆದುರಿಸಲು ಅಸಾಧ್ಯವಾಗಿ, ಆತ ತನ್ನ ಜನರೊಂದಿಗೆ ಹಂಗರಿಯ 4ನೆಯ ಬೇಲಾ ದೊರೆಗೆ ಶರಣಾಗತನಾದ. ರೋಷಗೊಂಡ ಮಂಗೋಲಿಯನರು 1241-42ರಲ್ಲಿ ಆ ದೇಶದ ಮೇಲೆ ಬಹುಶಃ ಸೇಡು ತೀರಿಸಿಕೊಳ್ಳಲೇನೋ ಎಂಬಂತೆ ಯುದ್ಧ ಮಾಡಿದರು. ಮಂಗೊಲರ ಆಕ್ರಮಣದಿಂದ ಕಿಪ್ಚಾಕ್ ಜನಾಂಗ ಒಂದು ರೀತಿಯಲ್ಲಿ ನಿತ್ರಾಣವಾದರೂ ಕುಮಾನರು ಶಕ್ತರಾಗಿಯೇ ಇದ್ದರು. 1240ರಲ್ಲಿ ಅವರು 2ನೆಯ ಬಾಲ್ಡ್‍ವಿನನ ಪರವಾಗಿಯೂ 1259ರಲ್ಲಿ 8ನೆಯ ಮೈಕಿಲ್ ಪಾಲಿಯೊ ಲೊಗಪನ ಪರವಾಗಿಯೂ ಕಾದಾಡಿದರು.

 ಮಾಮೆಲ್ಯೂಕರೆಂಬ ಕಿಪ್ಚಾಕ್ ಗುಲಾಮರು ಅಯ್ಯುಬಿಡ್ ಸೇನೆಗೆ ಸೇವೆ ಸಲ್ಲಿಸುತ್ತಿದ್ದು, ಆ ಮೇಲೆ ಈಜಿಪ್ಟ್ ಮತ್ತು ಸಿರಿಯಗಳ ಚರಿತ್ರೆಯಲ್ಲಿ ಮಹತ್ತ್ವಗಳಿಸಿ, ಅನಂತರ 19ನೆಯ ಶತಮಾನದವರೆಗೂ ಅವಶೇಷರೂಪವಾಗಿದ್ದರು. ಕಿಪ್ಚಾಕರ ಇನ್ನೊಂದು ಬಣ ಕರಾಯಿಮರದು. ಇವರು ಉತ್ತರ ಲಿಥೂವೇನಿಯಕ್ಕೆ ವಲಸೆ ಬಂದರು. ಈಗಲೂ ಇವರು ಪೋಲೆಂಡಿನಲ್ಲಿದ್ದಾರೆ. ಕಿಪ್ಚಾಕರ ಸಾಮಾಜಿಕ ಜೀವನ ಬಹಳ ಅಸ್ಥಿರವಾಗಿಯೂ ಅವ್ಯವಸ್ಥಿತವಾಗಿಯೂ ಇತ್ತು. ಅವರು ಅಲೆಮಾರಿಗಳಾಗಿದ್ದರು. ಲ್ಯಾಟಿನ್ ಸಾಮ್ರಾಜ್ಯದ ಫ್ರಾಂಕರ ಹಾಗೂ ಕಿಪ್ಚಾಕರ ನಡುವೆ ವಿವಾಹ ಸಂಬಂಧಕ್ಕೆ ಯಾವ ಅಡಚಣೆಯೂ ಇರಲಿಲ್ಲ. ಒಂದು ರೀತಿಯ ಕಾಡುಜನರಾಗಿದ್ದ ಅವರು ಉಳುವೆ ಬೇಸಾಯವನ್ನು ಅರಿತಿರಲಿಲ್ಲ. ಅವರ ವಾಸ ಗುಡಿಸಲು ಅಥವಾ ಮನೆಗಳಲ್ಲಲ್ಲ, ಫೆಲ್ಟ್‍ನಿಂದ ಮಾಡಿದ ಗುಡಾರಗಳಲ್ಲಿ, ಹಾಲು, ಗಿಣ್ಣು, ಮಾಂಸಗಳೇ ಅವರ ಆಹಾರ. ಪ್ರತಿಯೊಬ್ಬ ನಿವಾಸಿಯ ಬಳಿಯೂ ಹತ್ತು ಹನ್ನೆರಡು ಕುದುರೆಗಳಿರುತ್ತಿದ್ದವು. ಚಳಿಗಾಲದಲ್ಲಿ ಅವರು ಗುಡಾರಗಳಿಂದ ಹೊರಬಂದು ಆಕ್ರಮಣ ನಡೆಸುತ್ತಿದ್ದರು.

 ಕಿಪ್ಚಾಕ್ ಒಂದು ತುರ್ಕಿ ಭಾಷೆ. ಈ ಭಾಷೆಯಲ್ಲಿ ರಚಿತವಾದ ಕೋಡೆಕ್ಸ್ ಕ್ಯುಮಾನಿಕನ್ ಎಂಬ ಉಗ್ಗ್ರಂಥವೊಂದನ್ನು ವೆನಿಸಿನ ಸೇಂಟ್ ಮಾರ್ಕ್ ಗ್ರಂಥಾಲಯದಲ್ಲಿ ರಕ್ಷಿಸಿಡಲಾಗಿದೆ. ಇದು ಬಹುಶಃ 13-14ನೆಯ ಶತಮಾನಗಳಲ್ಲಿ ರಚಿತವಾಗಿದ್ದಿರಬೇಕು. ಇದರಲ್ಲಿ ಲ್ಯಾಟಿನ್‍ನಿಂದ ಭಾಷಾಂತರವಾದ ಕೆಲವು ಭಾಗಗಳಿವೆಯಲ್ಲದೆ ಶಬ್ದಗಳ ಪಟ್ಟಿಯೂ ಕುಮಾನ್-ಜರ್ಮನ್ ಶಬ್ದಕೋಶವೊ ಇದ್ದುದರ ಫಲವಾಗಿ ಕುಮಾನ್-ಅರಬ್ಬೀ ಶಬ್ದಕೋಶಗಳೂ ವ್ಯಾಕರಣಗಳೂ ರಚಿತವಾದವು. ತುರ್ಕಿಭಾಷೆ ಚರಿತ್ರೆಗಳನ್ನಭ್ಯಾಸ ಮಾಡಲು ಇವೆಲ್ಲ ಉಪಯುಕ್ತವಾಗಿವೆ. ಕಿಪ್ಚಾಕರನ್ನು ಕ್ರೈಸ್ತರನ್ನಾಗಿ ಮತಾಂತರಗೊಳಿಸಬೇಕೆಂಬುದು ಸಂತಡೊಮಿನಿಕನ ಮಹದಾಶೆಯಾಗಿತ್ತು. ಆದರೆ ಬಹುಮಟ್ಟಿಗೆ ಅದು ಕನಸಾಗಿಯೇ ಉಳಿಯಿತು.      

 (ಎಸ್.ಎಲ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ